ಹಿಂದೂ ಪಂಚಾಂಗ - ಭಾಗ ೧

ಹಿಂದೂ ಪಂಚಾಂಗ - ಭಾಗ ೧

   ಪಂಚಾಂಗ ಎಂಬುದು ಹಿಂದೂ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಅನುಸರಿಸುವ ಪ್ರತಿಯೊಬ್ಬ ಹಿಂದೂವಿನ ದೈನಂದಿನ ಬದುಕಿನ ಭಾಗವಾಗಿದೆ.

ಪಂಚಾಂಗ ಎಂದರೇನು?

   ಪಂಚಾಂಗ ಎಂಬುದು ಸಂಸ್ಕೃತ ಪದ. ಇದು ಪಂಚ ಎಂದರೆ ಐದು ಮತ್ತು ಅಂಗ ಎಂದರೆ ಕೈಕಾಲುಗಳು (ಭಾಗಗಳು) ಎಂಬ ಎರಡು ಪದಗಳ ಸಂಯೋಜನೆಯಾಗಿದೆ. ಪಂಚಾಂಗ ಎಂದರೆ ಸಮಯದ ಐದು ಅವಯವಗಳು. ಅರ್ಥಾತ್ ಸಮಯದ ಎಲ್ಲಾ ನಿದರ್ಶನಗಳು ಈ ಐದು ಗುಣಲಕ್ಷಣಗಳನ್ನು ಹೊಂದಿವೆ. ತಿಥಿ, ವಾರ, ನಕ್ಷತ್ರ, ಯೋಗ ಮತ್ತು ಕರಣ.

   ಇವು ಪ್ರತಿದಿನವೂ ಬದಲಾಗುತ್ತದೆ. ಮಾಸ, ಪಕ್ಷ, ಋತುಗಳು ಬದಲಾಗುವವಾದರೂ ಪ್ರತಿ ದಿನವೂ ಬದಲಾಗುವುದಿಲ್ಲ. ಆದರೆ ಇಂದಿನ ತಿಥಿ, ವಾರ, ನಕ್ಷತ್ರ, ಯೋಗ, ಕರಣಗಳು ನಾಳೆ ಇರುವುದಿಲ್ಲ. ಪಂಚಾಂಗ ಪುಸ್ತಕದಲ್ಲಿ ತಿಥಿ, ವಾರಾದಿಗಳ ಜೊತೆಗೆ ಸಂವತ್ಸರ, ಆಯನ, ಮಾಸ, ಪಕ್ಷ, ಋತುಗಳು, ಇವುಗಳಲ್ಲದೆ ಇನ್ನಿತರ ಧಾರ್ಮಿಕ ಪರ್ವದಿನಗಳೂ ಬರೆದಿರುತ್ತದೆ.


ತಿಥಿ

   ಒಟ್ಟು ತಿಥಿಗಳು ಮೂವತ್ತು (೩೦). ಈ ತಿಥಿಗಳನ್ನು ಎರಡು ಪಕ್ಷಗಳಲ್ಲಿ ತಲಾ ೧೫ ರಂತೆ ಎಣಿಕೆ ಮಾಡಲಾಗಿದೆ. ಪಾಡ್ಯ(ಪ್ರತಿಪದೆ)ದಿಂದ ಆರಂಭವಾಗಿ ಹುಣ್ಣಿಮೆಯವರೆಗೆ ಬರುವ ಮೊದಲ ೧೫ ತಿಥಿ(ದಿನ)ಗಳಿಗೆ ಶುಕ್ಲಪಕ್ಷವೆಂತಲೂ, ಪಾಡ್ಯದಿಂದ ಅಮಾವಾಸ್ಯೆಯವರೆಗೆ ಬರುವ ಮುಂದಿನ ೧೫ ತಿಥಿ(ದಿನ)ಗಳಿಗೆ ಕೃಷ್ಣಪಕ್ಷವೆಂತಲೂ ಕರೆಯುತ್ತಾರೆ.

ಪಾಡ್ಯ (೧), ಬಿದಿಗೆ (೨), ತದಿಗೆ (೩), ಚೌತಿ (೪), ಪಂಚಮಿ (೫), ಷಷ್ಠಿ (೬ ), ಸಪ್ತಮಿ (೭), ಅಷ್ಟಮಿ (೮), ನವಮಿ (೯), ದಶಮಿ (೧೦), ಏಕಾದಶಿ (೧೧), ದ್ವಾದಶಿ (೧೨), ತ್ರಯೋದಶಿ (೧೩), ಚತುರ್ದಶಿ (೧೪),
ಶುಕ್ಲಪಕ್ಷ: ಹುಣ್ಣಿಮೆ (೧೫) / ಕೃಷ್ಣಪಕ್ಷ: ಅಮಾವಾಸ್ಯೆ (೧೫)


ವಾರ

   ವಾರಗಳು ಏಳು (೭). ನವಗ್ರಹಗಳಲ್ಲಿ ರಾಹು ಮತ್ತು ಕೇತುಗಳನ್ನು ಬಿಟ್ಟು ಉಳಿದ ಏಳು ಅಂದರೆ ಚಂದ್ರ, ಮಂಗಳ, ಬುಧ, ಗುರು, ಶುಕ್ರ, ಶನಿ ಹಾಗೂ ರವಿ ಗ್ರಹಗಳ ಹೆಸರಿನಿಂದ ವಾರಗಳನ್ನು ಹೆಸರಿಸಲಾಗಿದೆ.

ಸೋಮವಾರ, ಮಂಗಳವಾರ, ಬುಧವಾರ, ಗುರುವಾರ, ಶುಕ್ರವಾರ, ಶನಿವಾರ, ಭಾನುವಾರ


ನಕ್ಷತ್ರ

   ದಕ್ಷಪ್ರಜಾಪತಿಗೆ ಅರವತ್ತು ಹೆಣ್ಣುಮಕ್ಕಳು. ಅವರಲ್ಲಿ ಇಪ್ಪತ್ತೇಳು (೨೭) ಮಕ್ಕಳನ್ನು ಚಂದ್ರನಿಗೆ ಕೊಟ್ಟು ಮದುವೆ ಮಾಡಿದ. ಚಂದ್ರನ ಹೆಂಡತಿರೇ ಈ ಇಪ್ಪತ್ತೇಳು ನಕ್ಷತ್ರಗಳು. ಆಶ್ಚರ್ಯವೆಂದರೆ ಈ ನಕ್ಷತ್ರಗಳನ್ನು ಹೇಳುವ ಎಲ್ಲ ಶಬ್ದಗಳು ಸ್ತ್ರೀಲಿಂಗಗಳಲ್ಲ. ಶ್ರವಣ ಮೂಲ ಶಬ್ದಗಳು ನಪುಂಸಕಲಿಂಗವಾದರೆ ಪುಷ್ಯ, ಹಸ್ತ ಶಬ್ದಗಳು ಪುಲ್ಲಿಂಗದವು. ಚಂದ್ರ ಪ್ರತಿದಿನವೂ ನಕ್ಷತ್ರದಿಂದ ನಕ್ಷತ್ರಕ್ಕೆ ಸಂಚರಿಸುತ್ತಾನೆ. ಹೆಚ್ಚುಕಡಿಮೆ ಒಂದು ದಿನಕಾಲ ನಕ್ಷತ್ರವೊಂದರಲ್ಲಿ ಇರುತ್ತಾನೆ. ಚಂದ್ರನಿರುವ ನಕ್ಷತ್ರವನ್ನು ನಿತ್ಯನಕ್ಷತ್ರವೆನ್ನುತ್ತೇವೆ. ಅದೇ ರೀತಿ ಸೂರ್ಯನು ಒಂದು ನಕ್ಷತ್ರದಲ್ಲಿ ಸುಮಾರು ಹದಿಮೂರು ದಿನಗಳಿರುತ್ತಾನೆ. ಸೂರ್ಯನಿರುವ ನಕ್ಷತ್ರವನ್ನು “ಮಹಾನಕ್ಷತ್ರ” ಎನ್ನುತ್ತೇವೆ.

೧.ಅಶ್ವಿನಿ ೨.ಭರಣಿ ೩.ಕೃತ್ತಿಕ ೪.ರೋಹಿಣಿ ೫.ಮೃಗಶಿರ ೬.ಆರ್ದ್ರಾ ೭.ಪುನರ್ವಸು ೮.ಪುಷ್ಯ ೯.ಆಶ್ಲೇಷ ೧೦.ಮಖೆ ೧೧.ಪುಬ್ಬೆ ೧೨.ಉತ್ತರೆ ೧೩.ಹಸ್ತ ೧೪.ಚಿತ್ತೆ ೧೫.ಸ್ವಾತಿ ೧೬.ವಿಶಾಖ ೧೭.ಅನೂರಾಧ ೧೮.ಜ್ಯೇಷ್ಠ ೧೯.ಮೂಲ ೨೦.ಪೂರ್ವಾಷಾಢ ೨೧.ಉತ್ತರಾಷಾಢ ೨೨.ಶ್ರವಣ ೨೩.ಧನಿಷ್ಥೆ ೨೪.ಶತಭಿಷೆ ೨೫.ಪೂರ್ವಾಭಾದ್ರೆ ೨೬.ಉತ್ತರಾಭಾದ್ರೆ ೨೭.ರೇವತಿ.


ಯೋಗ

   ಪಂಚಾಂಗದಲ್ಲಿ ಯೋಗವೆಂಬ ಶಬ್ದವು ಇಪ್ಪತ್ತೇಳು (೨೭) ಯೋಗಗಳನ್ನು ಹೇಳುತ್ತದೆ. ನಕ್ಷತ್ರದಂತೆ ಯೋಗವೂ ಸಮಾನ್ಯವಗಿ ೬೦ ಘಳಿಗೆ ಇರುವುದರಿಂದ ಪ್ರತಿದಿನವೂ ಬದಲಾಗುತ್ತದೆ. ಪಂಚಾಂಗದಲ್ಲಿ ಯೋಗವನ್ನು ಸಂಕ್ಷಿಪ್ತಾಕ್ಷರದಲ್ಲಿ ಸೂಚಿಸಿ ಅದರ ಮುಂದೆ ಉದಯಾನಂತರ ಯೋಗದ ಅವಧಿಯನ್ನು ಘಳಿಗೆಗಳಲ್ಲಿ ಸೂಚಿಸಿರುತ್ತಾರೆ.

೧.ವಿಷ್ಕಂಭ ೨.ಪ್ರೀತಿ ೩.ಆಯುಷ್ಮಾನ್ ೪.ಸೌಭಾಗ್ಯ ೫.ಶೋಭನ ೬.ಅತಿಗಂಡ ೭.ಸುಕರ್ಮ ೮.ಧೃತಿ ೯.ಶೂಲ ೧೦.ಗಂಡ ೧೧.ವೃದ್ಢಿ ೧೨.ಧ್ರುವ ೧೩.ವ್ಯಾಘಾತ ೧೪.ಹರ್ಷಣ ೧೫.ವಜ್ರ ೧೬.ಸಿದ್ಧಿ ೧೭.ವ್ಯತೀಪಾತ ೧೮.ವರಿಯಾನ್ ೧೯.ಪರಿಘ ೨೦.ಶಿವ ೨೧.ಸಿದ್ಧ ೨೨.ಸಾಧ್ಯ ೨೩.ಶುಭ ೨೪.ಶುಕ್ಲ ೨೫.ಬ್ರಹ್ಮ ೨೬.ಐಂದ್ರ ೨೭.ವೈಧೃತಿ


ಕರಣ

   ಬವ, ಬಾಲವ ಮೊದಲಾದ ಕರಣಗಳು ಹದಿನೆಂಟು (೧೮). ಇದರಲ್ಲಿ ಮೊದಲ ಏಳು ಕರಣಗಳನ್ನು ಸ್ಥಿರಕರಣಗಳೆಂದೂ, ಕೊನೆಯ ನಾಲ್ಕು ಕರಣಗಳನ್ನು ಚರಕರಣಗಳೆಂದೂ ಜ್ಯೋತಿಶ್ಶಾಸ್ತ್ರವು ಪರಿಗಣಿಸಿದೆ. ಒಂದು ತಿಥಿಗೆ ಎರಡು ಕರಣಗಳು. ಒಂದು ತಿಥಿಯ ಪೂರ್ಣಕಾಲ ಅರುವತ್ತು ಘಳಿಗೆಗಳಿದ್ದರೆ ೩೦ ಘಳಿಗೆಯನ್ನು ಹಂಚಿಕೊಂಡು ೨ ಕರಣಗಳಿರುತ್ತವೆ.

೧.ಬವ, ೨.ಬಾಲವ, ೩.ಕೌಲವ, ೪.ತೈತಲೆ, ೫.ಗರಜೆ, ೬.ವಣಿಕ್, ೭.ಭದ್ರೆ, ೮.ಶಕುನಿ, ೯.ಚತುಷ್ಪಾತ್, ೧೦.ನಾಗವಾನ್, ೧೧.ಕಿಂಸ್ತುಘ್ನ

Rating:

comments powered by Disqus